ಆದರ್ಶ ಪುತ್ರ ಮೋದೀ ಜೀ

 *ಸ ಜಾತೋ ಯೇನ ಜಾತೇನ ಯಾತಿ ವಂಶಃ ಸಮುನ್ನತಿಮ್*|

ವಂಶವೊಂದು ಯಾರ ಜನ್ಮದಿಂದ ಸಾರ್ಥಕತೆಯನ್ನು ಪಡೆಯುತ್ತದೋ‌,‌ಅವನ ಜನ್ಮ ಈ ಪ್ರಪಂಚದಲ್ಲಿ ಅರ್ಥಪೂರ್ಣ.

ಅಂತಹ ವ್ಯಕ್ತಿಗೆ ಜನ್ಮ ಕೊಟ್ಟ ಮಾತಾಪಿತೃಗಳ ಬದುಕೂ ಅಷ್ಟೇ ಸಾರ್ಥಕ.


ಮಕ್ಕಳೇ ಇಲ್ಲದ ಕೌಸಲ್ಯೆಗೆ ಸಾಕ್ಷಾತ್ ಶ್ರೀಮನ್ನಾರಾಯಣನೇ ಮಗನಾಗಿ ಜನಿಸಿದ್ದ. 


ತನ್ನ ಸಾವನ್ನು ಎದುರಿಸಲಾರದ ಕಂಸನು, ದೇವಕಿ ಹಡೆದ ಏಳು ಶಿಶುಗಳನ್ನು ಜನಿಸಿದಾಕ್ಷಣ ನಿರ್ದಯೆಯಿಂದ ಹತ್ಯೆ ಮಾಡಿದ್ದ. ಅಂತಹ ಕಂಸನ ಕಣ್ಣಿಗೆ ಮಣ್ಣೆರಚಿ ದೇವಕಿಯ ಗರ್ಭಾಂಬುಧಿಯಿಂದ ಅದೇ ನಾರಾಯಣ ಕೃಷ್ಣಾಭಿಧಾನದಿಂದ ಅವತರಿಸಿದ್ದ‌.


ಇವರೀರ್ವರ ಜನ್ಮದಿಂದ ಆ ಎರಡೂ ವಂಶ ಗೌರವಾದರ ಪಡೆದು ಲೋಕೋತ್ತರ ಕೀರ್ತಿಗೆ ಪಾತ್ರವಾಯಿತು.

ಧರ್ಮ ಸಂಸ್ಥಾಪನೆಗೆ ತಾನು ಮತ್ತೆ ಮತ್ತೆ ಪುಣ್ಯವಂತರ ಗರ್ಭದಿಂದ ಅವತರಿಸುವೆ ಎಂದು ಘಂಟಟಘೋಷವಾಗಿ‌ ನುಡಿದಿದ್ದ.


ರಾಮನನ್ನು ಮತ್ತು ಕೃಷ್ಣನನ್ನು ಹಡೆದ, ಪಡೆದ ಆ ತಾಯಿಯರು ನವಮಾಸಪರ್ಯಂತ  ತಮ್ಮ ಉದರದಲಿ ಧರಿಸಿದ್ದ ಕಾರಣದಿಂದ ತಮ್ಮ ಗರ್ಭವನ್ನೇ ದೇವರ ಗರ್ಭಗುಡಿಯನ್ನಾಗಿಸಿಕೊಂಡರು ಹಾಗೂ ಸಾರ್ಥಕತೆಯನ್ನೂ ಪಡೆದರು.


ವಂಶ ಹಾಗೂ ತಾಯಿ ತಂದೆಯರ ಹೆಸರು ಸ್ಥಿರವಾಯಿತು, ಚಿರವಾಯಿತು.

ಹೀರಾ ಬೇನ್ ಎಂಬ ದೈವವನ್ನೇ  ಹೊತ್ತು, ಹೆತ್ತ  ಓ ಅಮ್ಮಾ,

ವರ್ತಮಾನ ಕಲಿಯುಗದ ಈ ಕಾಲದಲ್ಲಿ ಅದೇ ತೆರನಾದ ವ್ಯಕ್ತಿತ್ವ ಹೊಂದಿ ದೇಶ ಕಾಯುವ ಚೌಕಿದಾರನಿಗೆ ಒಂಭತ್ತು ತಿಂಗಳು ನಿನ್ನ ಉದರದಲ್ಲಿ  ನೀ ನೀಡಿದ ಆಶ್ರಯ ಅನನ್ಯ. 

ನೀ ಹೊತ್ತಿದ್ದು ಮಾಂಸದ 

ಪಿಂಡವಲ್ಲ ಅಮ್ಮಾ, 

ಅದು ದೈವಿಕ ಶಕ್ತಿಯಾಗಿತ್ತು. 

ನಿನ್ನ ಉಸಿರನ್ನೇ ಆ ಪಿಂಡಕ್ಕೆ ಧಾರೆಯೆರೆದು ಜೀವ ತುಂಬಿದ್ದ ನೀನು, ಅಂದು  ಹೆತ್ತಿದ್ದು ಓರ್ವ ಸಾಮಾನ್ಯ ಶಿಶುವಾಗಿರಲಿಲ್ಲ ತಾಯೆ, ಅದು ಸಾಕ್ಷಾತ್ ರಾಮ ಕೃಷ್ಣರಂತಹ ಲೋಕೋದ್ಧಾರಕ ಶಕ್ತಿಯಾಗಿತ್ತು.


ಇಂದು ಭಾರತೀಯರೆಲ್ಲರೂ ವಿಶ್ವಮಟ್ಟದಲ್ಲಿ ಹೊಂದಿರುವ ಗೌರವಾದರಗಳ ಕೇಂದ್ರಸ್ಥಾನವಾಗಿರುವ "ಮೋದೀ ಜಿ"ಯವರ ಮೂಲ ಆವಾಸ ಸ್ಥಾನ ನೀನು, ಆ ನಿನ್ನುದರ.


ಇಂತಹ ಭಾರತದ ಹೆಮ್ಮೆಯ ಮಗನನ್ನು ಹೆತ್ತ ನಿನಗೆ ಸಾವಿಲ್ಲ.‌


 ಸಾವಿರದ ಅನುಪಮ ಜೀವಕೋಶಕ್ಕೆ  ಉಸಿರಾದ  ನಿನಗೆ‌ ಎಂದೆಂದೂ ಸಾವಿಲ್ಲ.

ನೀ ಮೃತ್ಯುಂಜಯನ ತಾಯಿ‌.


ಈ ದೇಶ ಇರುವವರೆಗೆ ನಿನ್ನ ಮಗನ ಹೆಸರು ಚಿರ. 


ಆ ಮಗನ ಹೆಸರು ಇರುವವರೆಗೂ ನಿನ್ನ ಹೆಸರು, ತ್ಯಾಗ, ಸರಳತೆ, ಕರುಣಾಪೂರ್ಣತೆಗಳೂ  ಸ್ಥಿರ.


ರಾಮ ಮಂದಿರದ ನೇತಾರನಾದ ಮಗನಿಗೆ ತಾಯಿಯಾದ ನೀ ಕೌಸಲ್ಯೆ.


ಮಥುರಾನಾಥನ ದಿವ್ಯ ಸೌಧಕ್ಕೆ ಅಡಿಗಲ್ಲಿಟ್ಟ ಮಗುವಿನ ಅಮ್ಮನಾದ ನೀ ದೇವಕೀ.

ಜಗದಗಲ ವಿಸ್ತಾರಗೊಳ್ಳುತ್ತಲೆ ಸಾಗಿರುವ ಯಶಃಕಾಯದ ತೇಜಸ್ಸನ್ನು ಪಾಲಿಸಿಯೂ  ,  ಹಮ್ಮು-ಬಿಮ್ಮುಗಳಿಂದ ಗಾವುದ ದೂರ ನಿಂತು, ಸಾಮಾನ್ಯರಲ್ಲಿ ಅತ್ಯಂತ ಸಾಮಾನ್ಯಳಾಗಿ ಶತಸಂವತ್ಸರಗಳನ್ನು ಕಳೆದು, ಮುಗ್ಧವಾಗಿಯೇ ಈ ದೇಶದ ಚೌಕೀದಾರನ ಪಾಲನೆ ಮಾಡಿದ ನೀನು

ಬಾಯಲ್ಲೇ ಬ್ರಹ್ಮಾಂಡ ತೋರಿದರೂ,  ದೇವನನ್ನೂ, ಕೇವಲ ತನ್ನ  ಮಗೆನೆಂದೇ ಮುದ್ದಿಸಿದ ಯಶೋದೆ ನೀನು‌.


ಕಾಶಿಯನ್ನು ಮತ್ತೊಮ್ಮೆ ಪ್ರಕಾಶಮಾನಗೊಳಿಸಿದ,  ಜನ್ಮವೇ ಇಲ್ಲದ‌ ಆ ಶಿವನ ಮತ್ತೊಂದು ರೂಪವಾದ ಈ  ಚೌಕಿದಾರ‌ನ  ಮಮತೆಯ ಮಾತೆ ನೀನು.


ಹುಟ್ಟಿನಿಂದ ಅನಾಥತ್ವವನ್ನೇ  ಎದುರಿಸಿ, ಮುಂದೆ ಕಷ್ಟನಷ್ಟಗಳನ್ನೆ ಬದುಕನ್ನಾಗಿಸಿಕೊಂಡು, 

ಅರಗಿನಾಲಯದಿಂದ ಪಾರಾದ ದಿನದಿಂದ  ತೊಡಗಿ , ಕಳೆದುಕೊಂಡ ರಾಜ್ಯದ ಪ್ರಾಪ್ತಿಯವರೆಗಿನ ಬವಣೆಗಳ ನಡುವೆಯೂ

ಸಶರೀರ ಸ್ವರ್ಗಾರೋಹಣ ಮಾಡಿದ ಧರ್ಮರಾಜನಂತ ಮಗನಿಗೆ  ಧರ್ಮಮಾರ್ಗ ತೋರಿದ, ಜೊತೆ ಜೊತೆಗೆ  ತನ್ನೆಲ್ಲಾ ಮಕ್ಕಳ  ಪಾಲನೆ ಹಾಗೂ ರಕ್ಷಣೆಗೆ ನಿಂತ ಮಹಾಮಾತೆ ಕುಂತಿ ನೀನು.


ಅಪ್ಪಟ ಸನಾತನ ಸಂಸ್ಕೃತಿಯ ಒಲವಿರುವ

ಭಾರತದ ನೂರಾರು ಕೋಟಿ ಪ್ರಜಾವೃಂದದ ಪಾಲಕನಾದ ಚೌಕೀದಾರನ ಅಮ್ಮನಾದ ನೀ ನಮಗೆ ನಮ್ಮನೆಯ ಪ್ರೀತಿಯ ಅಮ್ಮಮ್ಮ - ಅಜ್ಜಿ.


ದಿವ್ಯಲೋಕಾನುಭೂತಿಯ ಪ್ರಯಾಣಕ್ಕೆ ಶುಭಕೋರುವೆ.


ನಿನ್ನ ಉಸಿರು ಸದಾ ನರೇಂದ್ರನ ರೂಪದಲ್ಲಿ ಹಸಿರು. 

ನಿನ್ನ ಉಸಿರು ಭಾರತೀಯರ ಬದುಕನ್ನು ಬದಲಿಸುತ್ತಿರುವ  ಹೆಸರು,


ನಿನ್ನ ಉಸಿರು ಕೇವಲ ಉಸಿರಲ್ಲ ಅಮ್ಮಾ, ಅದು ಚೌಕೀದಾರ ಎಂಬ ಅಪ್ಪಟ ನಾಯಕನಿಗೆ ಉಸಿರು ಕೊಟ್ಟ ದೈವಿಕ ಕಳೆ, ಅಮೃತ ಧಾರೆ.


ನಿನ್ನ ಜನ್ಮ ಸಾರ್ಥಕ. ಮತ್ತೆ ಜನ್ಮ ಬಾರದಿರುವ ಮುಕ್ತಿಧಾಮ ನಿನ್ನ ಆತ್ಮಕ್ಕೆ ಮನೆಯಾಗಲಿ.


ಹೆಮ್ಮೆಯ ಮಗನ

ನಲ್ಮೆಯ ಅಮ್ಮನಿಗೆ ಭಾರತೀಯರೆಲ್ಲರ ಪರವಾಗಿ ಶತ ಶತ ನಮನಗಳು.

ಸಾಯುಜ್ಯ-ಪ್ರಾಪ್ತಿರಸ್ತು.


ವಿನಾಯಕ ಭಟ್ಟ ಗಾಳಿಮನೆ ಗನ್ಧವಹ-ಸದನಮ್

Comments

Popular posts from this blog

ವೈಶಂಪಾಯನ ತೀರ ಬೆಂಬಲಿಸಿ

ಭಾರತೀಯ ಕಾಲ ಗಣನೆ - ಬದುಕಿನ ವಿಜ್ಞಾ‌ನವಿದು...